ಹೀನಯಾನ
	ಬೌದ್ಧ ಧರ್ಮದ ಎರಡು ಪ್ರಮುಖ ಶಾಖೆ (ಪಂಥ) ಗಳಲ್ಲೊಂದು, ಇನ್ನೊಂದು ಮಹಾಯಾನ. ಅರಿವಿನ ದಾರಿಕಾಣದೆ ಅಂಧ ಸಂಪ್ರದಾಯದ ಕಾರ್ಗತ್ತಲೆಯಲ್ಲಿ ನರಳುತ್ತಿದ್ದ ಜನಸಮುದಾಯಗಳನ್ನು ಸಂಸಾರ ಎಂಬ ಸಮುದ್ರದಿಂದ ಪಾರುಮಾಡಿ, ಮೋಕ್ಷ ಎಂಬ ದಡಮುಟ್ಟಿಸಲು ಬುದ್ಧ ಸ್ಥಾಪಿಸಿದ ಬೌದ್ಧಧರ್ಮದ ದೊಡ್ಡಶಾಖೆ. (ನೋಡಿ - ಮಹಾಯಾನ). ಸ್ಥವಿರವಾದಿಗಳು ಪಾಳೀಪಾಠದ ತ್ರಿಪಿಟಕ ವಾಙ್ಮಯವನ್ನೇ ಅವಲಂಬಿಸಿ ಪ್ರಾಚೀನ ಪಂಥವಾಗಿ ಉಳಿದರು. ಇವರೇ ಮುಂದೆ ಹೀನಯಾನ ಪಂಥವೆಂದು ಪ್ರಸಿದ್ಧರಾದರು. ಮಹಾಸಾಂಘಿಕರು ಹೊಸಕಲ್ಪನೆಗಳು ಅಳವಡಿಸಿಕೊಂಡು ಮಹಾಯಾನಕ್ಕೆ ಎಡೆ ಮಾಡಿಕೊಟ್ಟರು. ಸಿಂಹಳದ್ವೀಪ, ಬರ್ಮ (ಸುವರ್ಣಭೂಮಿ), ಸಯಾಂ (ಶ್ಯಾಮದೇಶ), ಕಂಬೋಡಿಯ (ಕಂಭೋಜದೇಶ) ಹಾಗೂ ಆಗ್ನೇಯ ಏಷ್ಯದ ಹಲವಾರು ಭಾಗಗಳಲ್ಲಿ ಪ್ರಚಲಿತವಾಗಿರುವ ಬೌದ್ಧಧರ್ಮವನ್ನು ಹೀನಯಾನವೆಂದು ಪರಿಗಣಿಸಲಾಗಿದೆ. ಹೀನಯಾನವೆಂಬುದು ಮಹಾಯಾನರವರು ಇಟ್ಟ ಹೆಸರೆಂಬುದು ನಿರ್ವಿವಾದ. ಇದಕ್ಕೆ ಕ್ರಿಸ್ತೌಬ್ದದಲ್ಲೇ ಈ ಹೆಸರು ಬಂದರೂ ಹೆಚ್ಚು ಪ್ರಚಲಿತವಾದದ್ದು ಐದನೆಯ ಶತಮಾನದಲ್ಲಿ. 

	ಹೀನಯಾನದವರು ತಮ್ಮ ತ್ರಿಪಿಟಕವಾಜ್ಞ್ಮಯ ಬುದ್ಧನ ನಿರ್ವಾಣದ ಅನಂತರ ರಾಜಗೃಯದಲ್ಲಿ ನಡೆದ ಮೊದಲನೆಯ ಭಿಕ್ಷುಸಂಗೀತಿಯಲ್ಲಿ ಸಿದ್ಧವಾಯಿತೆಂಬ ನಂಬಿಕೆಯಿದೆ. ಈ ಸಂಗೀತಿಯ ನಿರ್ವಹಣೆ ಮಹಾಕಾಶ್ಯಪನೆಂಬ ಹಿರಿಯ ಭಿಕ್ಷುವಿನ ಭಾರವಾಗಿದ್ದಿತು. ಬುದ್ಧನ ಶಿಷ್ಯರೆಲ್ಲ ಅಲ್ಲಿ ನೆರೆದು ಬುದ್ಧವಚನವನ್ನು ಕ್ರೋಢಿಕರಿಸಿದರು. ಉಪಾಲಿಯಿಂದ ವಿನಯಪಿಟಕವೂ ಅನಂದನಿಂದ ಸೂತ್ರಪಿಟಕವೂ ಸಿದ್ಧವಾದುವು. ಬುದ್ಧನ ಭಾಷೆಯಲ್ಲೇ, ಎಂದರೆ ಮಾಗಧೀ ಪ್ರಾಕೃತವಾದ ಪಾಳಿಯಲ್ಲಿ, ಅವನ ಮಾತುಗಳನ್ನು ಉಳಿಸಿಕೊಂಡುಬಂದರು. ಬಹುಕಾಲ ಈ ಪಂಥದವರಿಗೆ ಪಾಳಿಯೇ ಧರ್ಮದ ಭಾಷೆಯಾಗಿದ್ದಿತು. ಈ ಕಾರಣದಿಂದ ಹೀನಯಾನವನ್ನು ಪಾಳಿ ಭೌದ್ಧಧರ್ಮವೆಂದು ಕೆಲಸವು ನಿರ್ದೇಶಿಸುತ್ತಾರೆ. ಆದರೆ ಕ್ರಿಸ್ತಾಬ್ದ ಮೊದಲನೆಯ ಎರಡು ಶತಮಾನಗಳಲ್ಲಿ ತ್ರಿಪಿಟಕವಾಜ್ಞ್ಮಯ ಸಂಸ್ಕøತದಲ್ಲೂ ಮೂಡಿಬಂದು ಹೀನಯಾನ ಸರ್ವಾಸ್ತಿವಾದಿಗಳ ಪ್ರಕರಣ ಗ್ರಂಥವೆಲ್ಲ ಸಂಸ್ಕøತದಲ್ಲೇ ರಚನೆಗೊಂಡವೆಂಬುದು ಗಮನಾರ್ಹ. ಬುದ್ಧನು ನಿಧನಗೊಂಡ 236 ವರ್ಷಗಳ ಅನಂತರ (ಕ್ರಿ.ಪೂ 478) ಪಾಟಲಿಪುತ್ರದಲ್ಲಿ ಅಶೋಕ ಚಕ್ರವರ್ತಿ ತಿಸ್ಸಮೊಗ್ಗಲಿಪುತ್ತನೆಂಬ ಭಿಕ್ಷುವಿನ ಅಧ್ಯಕ್ಷತೆಯಲ್ಲಿ ಸಾವಿರ ಬೌದ್ಧಭಿಕ್ಷುಗಳ ನೇತೃತ್ವದಲ್ಲಿ ಮಹಾಸಂಗೀತಿಯೊಂದನ್ನು ನಡೆಸಿ ಸ್ಥವಿರವಾದವನ್ನು ಸ್ಥಿರಪಡಿಸಲಾಯಿತು. ಅನಂತರ ತಿಸ್ಸಮೊಗ್ಗಲಿಪುತ್ತನ ಶಿಷ್ಯನೂ ಅಶೋಕನ ಮಗನೂ ಆಗಿದ್ದ ಮಹೇಂದ್ರ ಸಿಂಹಳದ್ವೀಪಕ್ಕೆ ತೆರಳಿ ಈ ತತ್ತ್ವದ ಪ್ರಚಾರ ಕೈಗೊಂಡ. ಅನಂತರ (ಕ್ರಿ.ಪೂ. ಮೊದಲನೆಯ ಶತಮನಾನ) ಸಿಂಹಳರಾಜ ನಾಗಿದ್ದ ವಟ್ಟಗಾಮನಿ - ಅಭಯಸೆಮಬುನ ಕಾಲಕ್ಕೆ ವಿಶೇಷವಾದ ಪುರಸ್ಕಾರ ದೊರೆಯಿತು. ಅಲ್ಲಿಯವರೆಗೆ ಮೌಖಿಕವಾಗಿದ್ದ ತ್ರಿಪಿಟಕವಾಜ್ಞ್ಮಯವನ್ನು ಲಿಖಿತ ರೂಪಕೊಟ್ಟು ಉಳಿಸಿ ಬೆಳೆಸಿದ ಕೀರ್ತಿ ಈ ರಾಜನೆಂದು ನಂಬಿಕೆ. ಸಿಂಹಳದ್ವೀಪದಿಂದ ಈ ಸ್ಥವಿವರವಾದ ಕಾಲಕ್ರಮದಲ್ಲಿ ಬರ್ಮಾ (ಮಾಯನ್ಮರ್) ದೇಶಕ್ಕೆ ಹರಡಿ ಅಲ್ಲಿಯೂ ಬೀಡುಬಿಟ್ಟತು. 

	ತ್ರಿಪಿಟಕ ಸಾಹಿತ್ಯವೇ ಹೀನಯಾನಕ್ಕೆ ಆಧಾರ ಅಧಿಷ್ಠಾನಗಳಾದರೆ ಅದನ್ನು ಊರ್ಜಿತಗೊಳಿಸಿದ್ದು ತಿಸ್ಸನೇ ಬರೆದ ಕಥಾವಸ್ತು (ಕ್ರಿ.ಪೂ.478). ಅನಂತರ ಮಿಳಿಂದ ಪ್ರಶ್ನೆ (ಮಿಲಿಂದಪಜ್ಹಿ ಕ್ರಿ ಸ್ತಾಬ್ದ ಮೊದಲನೆಯ ಶತಮಾನ), ಬುದ್ಧóಘೋಷಾಚಾರ್ಯ (ನಾಲ್ಕನೆಯ ಶತಮಾನ)ನ ವಿಶುದ್ಧಿಮಾರ್ಗ (ವಿಸುದ್ಧಿಮಗ್ಗ), ತ್ರಿಪಿಟಕಟೀಕೆಗಳು (ಅಟ್ಠಕಥೆಗಳು); ಅದೇ ಕಾಲದಲ್ಲಿದ್ದು ಬುದ್ಧದತ್ತನ ಪರಮಾರ್ಥ ದೀಪನೀ (ಪರಮತ್ಥದೀಪನಿ); ನಾಲ್ಕನೆಯ ಶತಮಾನದ ದೀಪವಂಶ, ಮಹಾವಂಶ ಮುಂತಾಧವು. 

	ಯಾವೊಬ್ಬ ವ್ಯಕ್ತಿಯೂ ಧ್ಯಾನಸಮಪತ್ತಿಗಳನ್ನು ಪೂರೈಸಿ, ಕ್ಕೇಶಗಳನ್ನೂ ಆಶ್ರವಗಳನ್ನೂ ಕಳೆದುಕೊಂಡು ಅರ್ಹತನಾಗಬಲ್ಲನೆಂಬುದು ಇವರ ಪ್ರಮುಖ ನಿಲುವು. ಬುದ್ಧ ತಾನೇ ಈ ಸ್ಥಿತಿಯನ್ನು ಪಡೆದು, ಪಡೆಯುವ ಮಾರ್ಗವನ್ನು ಇತರರಿಗೆ ತಿಳಿಯಪಡಿಸಿದ. ಶಾಕ್ಯಪುತ್ರಗೌತಮ ಶಾಕ್ಯಮುನಿಯಾಗಿ ಮಹಾಶ್ರಮಣನಾಗಿ ಉರುವಿಲ್ವದಲ್ಲಿ ಕಠೋರವಾದ ತಪಶ್ಚರ್ಯೆಗಳನ್ನು ನಡೆಸಿ ಗಯಾಶೀರ್ಷದಲ್ಲಿ ಬೋಧಿಮಂಡದಲ್ಲಿ ಕುಳಿತು ಧ್ಯಾನ ಮಾಡಿ ಸಂಭೋಧಿಯನ್ನು ಪಡೆದಂದು ಬುದ್ಧನಾದ, ಅರ್ಹತನಾದ. ಹೀಗಾಗಿ ಅವನ ಜನ್ಮ ಅದೇ ಕಡೆಯದಾಯಿತು (ಅಂತಿಮಾ ಜಾತಿ), ಪುನರ್ಜನ್ಮಕ್ಕೆ ಮೂಲವಾದ ತೃಷ್ಣೆಯನ್ನು ಇಂಗಿಸಿ ನಿರ್ವಾಣವನ್ನು ಮುಟ್ಟಿದ. ಈ ಸ್ಥಿತಿ ಒದಗಿದಂದು ಬುದ್ಧನಿಗೆ ಜೀವನ್ಮುಕ್ತಿ ಒದಗಿತು. 

	ಹೀನಯಾನದವರ ಪ್ರಕಾರ : ಬುದ್ಧ ಮನುಷ್ಯ, ಗುರು, ದಾರಿತೋರಿಸಿದವ. ತನ್ನ ಆಯಸ್ಸು ಮುಗಿದ ಅನಂತರ ನಿಧನಹೊಂದಿದವ. ಅವನ ಅನುಗ್ರಹ, ಕರುಣೆಗಳು ಪ್ರಯೋಜನಕ್ಕೆ ಬಾರವು. ಅವನು ಇದ್ದಾಗಲೂ ಅವನ ಅನುಗ್ರಹದಿಂದ ಯಾರಿಗೂ ನಿರ್ವಾಣ ಒದಗಲಿಲ್ಲ, ದುಃಖ ಮರೆಯಲಾಗಲಿಲ್ಲ. ಬುದ್ಧ ದಾರಿತೋರಿಸುತ್ತಾನಷ್ಟೆ; ದಾರಿಯಲ್ಲಿ ಒಬ್ಬೊಬ್ಬನೂ ನಡೆದು ಗುರಿಮುಟ್ಟಬೇಕು. ಬೇರೆ ಉಪಾಯವಿಲ್ಲ. ಸ್ಥಾವಿರವಾದದ ಸಾಧನೆಯಲ್ಲಿ ಈ ವೈಯಕ್ತಿಕ ದೃಷ್ಟಿಯಿದೆ. ಪ್ರತ್ಯೇಕವಾಗಿ ಒಬ್ಬೊಬ್ಬನೂ ತಿಳಿದುಕೊಳ್ಳಬೇಕಾದ ತತ್ತ್ವ (ಪಚ್ಚತ್ತಂ ವೇದಿಕಬ್ಬೋ). ಬುದ್ಧ ದೈವವೆಂಬ ಕಲ್ಪನೆ ಇವರಲ್ಲಿ ಇಲ್ಲ. ಆದಕಾರಣ ಭಕ್ತಿಯ ಪ್ರಸ್ತಾಪ ಇಲ್ಲಿ ಬರದು. 

	ಹೀನಯಾನದಲ್ಲಿ ಸಂಪೂರ್ಣವಾದ ನಿರೀಶ್ವರವಾದವಿದೆ. ಅಲ್ಲಿ ವಿನಯಪಿಟಕಕ್ಕೆ ಹೆಚ್ಚಿನ ಮಹತ್ವ. ಇದರ ವ್ಯಾಪ್ತಿಯಲ್ಲಿ, ಮಹಾಯಾನದಲ್ಲಿರುವಂತೆ, ದೇವ-ದೇವತೆಗಳಿಲ್ಲ, ದೇವತಾಮೂರ್ತಿಗಳಿಲ್ಲ, ಪೂಜಾವಿಧಾನಗಳಿಲ್ಲ, ಮಂದಿರಗಳಿಲ್ಲ. ಈ ಕಾಲದಲ್ಲಿ ಬುದ್ಧಪೂಜನವೆಂಬುದು ಪ್ರಸಕ್ತವಾಗಿದ್ದರೂ ಅದು ಬುದ್ಧನ ನೆನಪಿಗೆ ಗೌರವತೋರಿಸುವ ವಿಧಾನವಷ್ಟೇ ವಿನಾ ಅಲ್ಲಿ ಪ್ರಸಾದದ ಕಾಮನೆಯಿಲ್ಲ, ಅನುಗ್ರಹದ ನಿರೀಕ್ಷೆಯಿಲ್ಲ. ದುಖಃದ ಅಸ್ತಂಗಮವೇ ಜೀವನದ ಧ್ಯೇಯ; ಸ್ವರ್ಗವನ್ನು ಸೇರಿ ಸುಖಪಡುವ ಬಯಕೆ ಸ್ಥಾವಿವರವಾದಿಗಳಿಗಿಲ್ಲ. ಹೀಗಾಗಿ ಮಾರ್ಗದಲ್ಲಿ ಸುಲಭೋಪಾಯಗಳ ಪ್ರಸಕ್ತಿಯಿಲ್ಲ. ದಾರಿಯಿರುವಷ್ಟು ದೂರವೂ ಹೋಗಬೇಕು; ಒಂದೊಂದು ಅಂಗುಲಭೂಮಿಯನ್ನೂ ದಾಟಬೇಕು, ಒಬ್ಬೊಬ್ಬರೂ ನಿಷ್ಠೆಯಿಂದ, ಅಲಸಿಕೆಯಿಲ್ಲದೆ ಮುಂದುವರೆಯಬೇಕು. 

	ಪ್ರಾಚೀನವಾದ ಅನಾತ್ಮವಾದ ಇಲ್ಲಿನ ತಾತ್ತ್ವಿಕದೃಷ್ಟಿ. ಪ್ರತೀತ್ಯಸಮುತ್ಪಾದದ ನಿರೂಪಣೆಯಿಂದ ನಿಷ್ಟನ್ನವಾಗುವ ಸಿದ್ಧಾಂತವೆಂದರೆ ಅನಾತ್ಮವಾದ. ಧಾತು, ಅಯತನ, ಸ್ಕಂಧ ಇವುಗಳ ಸಮಷ್ಟಿಯೇ ವಿಶ್ವ, ಇದೇ ವ್ಯಕ್ತಿಯ ವಿಶ್ಲೇಷಣೆಯ ವಿವರಗಳು. ಇವುಗಳಿಗೆ ಅಧಿಷ್ಠಾನ ರೂಪವಾಗಿ ವಿಜ್ಞಾನವಾಗಲೀ, ಶೂನ್ಯತೆಯಾಗಲೀ, ಭೂತಕಥಕವಾಗಲೀ ಇಲ್ಲ. ಇದೇ ಮಹಾಯಾನಕ್ಕೂ ಹೀನಯಾನಕ್ಕೂ ಇರುವ ಪ್ರಮುಖ ಭೇದ. ಅನಿತ್ಯ, ಅನಾತ್ಮ, ದುಃಖ ಎಂಬ ರತ್ನತ್ರಯಗಳೇ ಬೌದ್ಧಧರ್ಮದ ಸಾರವೆಂದು ಹೀನಯಾನದವರ ಎಣಿಕೆ. 

	ಮಹಾಯಾನದವರು ಆಲಯ ವಿಜ್ಞಾನವನ್ನಾಗಲೀ ಶೂನ್ಯತೆಯನ್ನಾಗಲೀ ಕಥಕವನ್ನಾಗಲೀ ಒಪ್ಪಿದಾಗ ಅತ್ಮನನ್ನು ಒಪ್ಪಿದಂತೆಯೇ. ಸುಜ್ಜತ (ಶೂನ್ಯತ) ಎಂಬ ಪದ ಪಾಳೀವಾಜ್ಞ್ಮಯದಲ್ಲಿ ಕೂಡ ಬರುತ್ತದೆ. ಹೀನಯಾನದ ವಿವರಗಳು ಮಹಾಯಾನದಲ್ಲಿಯೂ ಉಳಿದುಬಂದವು. ಮಹಾಯಾನದ ಉಗಮಕ್ಕೇ ಕಾರಣವೆನಿಸಿದ ಮಹಾವಸ್ತು ಅವದಾನವು ಸಂಸ್ಕøತ ಹೀನಯಾನ ಸಂಪ್ರದಾಯಕ್ಕೆ ಸೇರಿದ್ದು.			
					(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ